25/05/2026
“ಅಭಿವೃದ್ಧಿಯ ನೆರಳಲ್ಲಿ ಮನುಷ್ಯತ್ವ ಮಲಗಿದಾಗ…”
ಕುಂದಾಪುರ ನಗರದ ಹೃದಯ ಭಾಗವಾದ Shastri Circle Flyover ಅಡಿಭಾಗ…
ಹಿಂದೊಮ್ಮೆ ಕಸದ ರಾಶಿ, ಕೊಳಕು, ಧೂಳು ಮತ್ತು ನಿರ್ಲಕ್ಷ್ಯದ ತಾಣವಾಗಿದ್ದ ಈ ಜಾಗವನ್ನು Lions Club ಸಾರ್ವಜನಿಕರ ಹಿತದೃಷ್ಟಿಯಿಂದ ಇಂಟರ್ಲಾಕ್ ಅಳವಡಿಸಿ ಸುಂದರವಾಗಿ ರೂಪಿಸಿತ್ತು. ಜನರು ವಿಶ್ರಾಂತಿ ಪಡೆಯಲಿ, ನಗರಕ್ಕೆ ಒಂದು ಶಿಸ್ತಿನ ಸೌಂದರ್ಯ ಮೂಡಲಿ ಎಂಬ ಉತ್ತಮ ಆಶಯದಿಂದ ನಿರ್ಮಾಣಗೊಂಡ ಈ ಸ್ಥಳ ಇಂದು ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ಈ ಛಾಯಾಚಿತ್ರಗಳು ಕಣ್ಣಿಗೆ ಕಟ್ಟುವಂತೆ ಹೇಳುತ್ತಿವೆ.
ನಗರದ ಮಧ್ಯ ಭಾಗದಲ್ಲೇ ಅನೇಕರು ಮದ್ಯದ ಅಮಲಿನಲ್ಲಿ, ಕೆಲವು ವಲಸೆ ಕಾರ್ಮಿಕರು ದಿನವಿಡೀ ಇಲ್ಲಿ ಮಲಗುವ ದೃಶ್ಯ ಈಗ ಸಾಮಾನ್ಯವಾಗಿದೆ. ಪ್ರತಿ ನಿತ್ಯ ಸದ್ರಿ ಪ್ರದೇಶದಲ್ಲಿ ಹೋಗುವ, ಬಸ್ಸಿಗಾಗಿ ಕಾಯುವ, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಪ್ರವಾಸಿಗರಿಗೆ , ಅಸಹಜ ಭಾವನೆ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ. ಸಾರ್ವಜನಿಕರಿಗಾಗಿ ನಿರ್ಮಿಸಿದ ಸ್ಥಳವೇ ನಿಧಾನವಾಗಿ ಅಶುಚಿತ್ವ, ಅಸುರಕ್ಷತೆ ಮತ್ತು ನಿರ್ಲಕ್ಷ್ಯದ ಸಂಕೇತವಾಗುತ್ತಿರುವುದು ನೋವಿನ ಸಂಗತಿ.
ಇಲ್ಲಿ ಪ್ರಶ್ನೆ ಯಾರನ್ನಾದರೂ ತಿರಸ್ಕರಿಸುವುದಲ್ಲ…
ಪ್ರಶ್ನೆ — “ಸಾರ್ವಜನಿಕ ಸ್ಥಳಗಳ ಗೌರವ ಉಳಿಯಬೇಕಲ್ಲವೇ?” ಎಂಬುದು.
ಒಂದು ನಗರ ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ಅದರ ಕಟ್ಟಡಗಳು ಹೇಳುವುದಿಲ್ಲ; ಬದಲಾಗಿ ಸಾರ್ವಜನಿಕ ಸ್ಥಳಗಳನ್ನು ಹೇಗೆ ಕಾಪಾಡಿಕೊಳ್ಳಲಾಗುತ್ತಿದೆ ಎಂಬುದೇ ಹೇಳುತ್ತದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ Flyover ಅಡಿಭಾಗ ಇಂದು ಕಾನೂನು ಇಲ್ಲದ ತಂಗುದಾಣದಂತೆ ಕಾಣುತ್ತಿರುವಾಗ, ಕುಂದಾಪುರ ಪುರಸಭೆಯ ಮೌನ ಜನರಲ್ಲಿ ಅಸಮಾಧಾನ ಹುಟ್ಟಿಸಿದೆ.
ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆ ತಕ್ಷಣ ಗಮನಹರಿಸಿ:
* ಸ್ಥಳದಲ್ಲಿ ನಿಯಮಿತ ತಪಾಸಣೆ ನಡೆಸಬೇಕು
* ಅಶುಚಿತ್ವ ತಡೆಯಲು ಕ್ರಮ ಕೈಗೊಳ್ಳಬೇಕು
* ಕುಡಿತ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು
* ವಲಸೆ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆ ಕುರಿತು ಚಿಂತಿಸಬೇಕು
* CCTV ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು
“ನಗರದ ಸೌಂದರ್ಯ ಕೇವಲ ಗೋಡೆ ಚಿತ್ರಗಳಲ್ಲಿ ಇರಬಾರದು…
ಅದನ್ನು ಕಾಪಾಡುವ ಮನಸ್ಸು ಆಡಳಿತದಲ್ಲೂ ಇರಬೇಕು.”
ಕುಂದಾಪುರದ ಗೌರವ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.
— ಗಿರೀಶ್ ಜಿ.ಕೆ
ಮಾಜಿ ಪುರಸಭಾ ಸದಸ್ಯರು, ಕುಂದಾಪುರ